ನಮ್ಮ ನಿತ್ಯ ಜೀವನದಲ್ಲಿ ಶೈಕ್ಷಣಿಕ ತಂತ್ರಜ್ಞಾನ ಬೆಳೆಯುತ್ತಿದ್ದಂತೆ, ನಮ್ಮ ಶಿಕ್ಷಣ ವ್ಯವಸ್ಥೆಯೂ ಕ್ರಮೇಣ ಉನ್ನತ ಮಟ್ಟಕ್ಕೆ ತಲುಪುತ್ತಿದೆ. ಇತ್ತೀಚಿನ ದಿನಗಳಲ್ಲಿ ಬದಲಾಯಿತ ಜ್ಞಾನ ಯುಗದಲ್ಲಿ ತಂತ್ರಜ್ಞಾನ ಶಿಕ್ಷಕರ ಕೈಯಲ್ಲಿರುವ ಶಕ್ತಿಯಂತಾಗಿದೆ. ನಮ್ಮ ಪುರಾತನ ಕಾಲದಲ್ಲಿ ತಂದೆ-ತಾಯಿ, ಮುತ್ತಜ್ಜ-ಮುತ್ತಜ್ಜಿ ಎಂಬವರಿಂದ ಬಂದ ಸಂಸ್ಕಾರ, ನಡತೆ, ಬುದ್ಧಿವಂತಿಕೆ ಇತ್ಯಾದಿ ನಮಗೆ ಅನೌಪಚಾರಿಕ ಶಿಕ್ಷಣವಾಗಿ ದೊರೆಯುತ್ತಿತ್ತು. ಇವು ನಮ್ಮ ನೈತಿಕ ಬಾಳಿಗೆ ದಿಕ್ಕು ನೀಡುತ್ತಿತ್ತು. ಆದರೆ ಶಾಲಾ, ಕಾಲೇಜುಗಳ ಮೂಲಕ ನಾವೂ ಔಪಚಾರಿಕ ವಿದ್ಯೆ ಪಡೆಯುತ್ತೇವೆ.
"ಗುರುವಿನ ಗುಲಾಮನಾಗು ತನಕ ದೊರೆ ಎನ್ನಬೇಡ" ಎಂಬ ನುಡಿಯನ್ನು ನಾವು ಕೇಳಿದ್ದೇವೆ. ಗುರು ಅಥವಾ ಶಿಕ್ಷಕರು ನಮ್ಮ ಜೀವನದ ದಾರಿ ತೋರಿಸುವ ದೀಪವಾಗಿದ್ದಾರೆ. ಅವರು ಮಕ್ಕಳಿಗೆ ಕೇವಲ ಪಾಠವಲ್ಲ, ಬದುಕು ಸಾಗಿಸುವ ಮೌಲ್ಯಗಳನ್ನೂ ಕಲಿಸುತ್ತಾರೆ. ಇಂದು ಕೆಲವರು ಶಿಕ್ಷಣ ಪಡೆದಿದ್ದಾರೆ, ಇನ್ನು ಕೆಲವರು ಇನ್ನೂ ‘ಶಿಕ್ಷಣ’ ಎಂದರೆ ಏನು ಎಂಬುದರ ಗೊಂದಲದಲ್ಲಿದ್ದಾರೆ. ಇಂತಹ ಗೊಂದಲಗಳನ್ನು ಪರಿಹರಿಸಿ, ಶಿಕ್ಷಣದ ಸತ್ಯ ರೂಪವನ್ನು ಗ್ರಹಿಸಲು ಈ ಲೇಖನ ಮಾರ್ಗದರ್ಶಿಯಾಗಬಹುದು.
ಶಿಕ್ಷಣದ ಅರ್ಥ:
ಶಿಕ್ಷಣ ಅಂದರೆ ಮಗುವಿನ ವರ್ತನೆಯನ್ನು ಧನಾತ್ಮಕವಾಗಿ ಬದಲಾಯಿಸುವ ಪ್ರಕ್ರಿಯೆ. ವಿಶಾಲ ಅರ್ಥದಲ್ಲಿ, ಸಮಾಜದ ಸುಧಾರಣೆಯ ದಿಕ್ಕಿನಲ್ಲಿ ವ್ಯಕ್ತಿಯ ಚಿಂತನೆ ಮತ್ತು ನಡೆ-ನಡಿಕೆಯನ್ನು ಮಾರ್ಪಡಿಸುವುದು ಶಿಕ್ಷಣ.
ಶಿಕ್ಷಣದ ಮಹತ್ವ:
1. ವೈಯಕ್ತಿಕ ಅಭಿವೃದ್ಧಿ:
ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಪಡೆದುವುದು ಜನ್ಮಸಿದ್ಧ ಹಕ್ಕು. ಶಿಕ್ಷಣದ ಮೂಲಕ ತಾನೇನು? ತನ್ನ ಗುರಿ ಏನು? ತನ್ನ ಜೀವನದ ಉದ್ದೇಶ ಏನು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಾನೆ. ಶಿಕ್ಷಣ ವ್ಯಕ್ತಿಯ ವ್ಯಕ್ತಿತ್ವ, ಸಂಯಮ, ಶಿಷ್ಟಾಚಾರ, ತಾಳ್ಮೆ ಇತ್ಯಾದಿಗಳ ಬೆಳೆವಣಿಗೆಗೆ ಸಹಾಯ ಮಾಡುತ್ತದೆ.ಮಗುವಿಗೆ ತಮ್ಮ ಸ್ವಂತ ಗುರಿಯನ್ನು ಸಾದಿಸುವಕ್ಕೆ ವ್ಯಯಕ್ತಿಕ ಅರಿವು ಮತ್ತು ಅಭಿವೃದ್ಧಿ ಹೊಂದುವುದು ಮುಖ್ಯ.
2. ಆರ್ಥಿಕ ಸ್ವಾವಲಂಬನೆ
ಶಿಕ್ಷಣದಿಂದ ವ್ಯಕ್ತಿಯ ಆರ್ಥಿಕ ಸ್ಥಿತಿ ಉನ್ನತಮಟ್ಟಕ್ಕೆ ಹೋಗುತ್ತದೆ. ಉತ್ತಮ ಉದ್ಯೋಗ, ಉದ್ಯಮ, ಸಂಶೋಧನೆ ಮುಂತಾದ ಮೂಲಕ ಹಣಕಾಸಿನ ಸ್ವಾತಂತ್ರ್ಯ ಸಾಧಿಸಬಹುದು. ಇದು ತಾನು ಮಾತ್ರವಲ್ಲ, ತನ್ನ ಕುಟುಂಬಕ್ಕೂ ಸಹಕಾರಿಯಾಗುತ್ತದೆ.
3. ಸಮಾಜದ ಸುಧಾರಣೆ
ಶಿಕ್ಷಿತ ವ್ಯಕ್ತಿ ಸಮಾಜದ ಸಮಸ್ಯೆಗಳನ್ನು ಅರಿತು, ಪರಿಹಾರಕ್ಕೆ ಮುಂದಾಗುತ್ತಾನೆ. ಸಾಮಾಜಿಕ ಜವಾಬ್ದಾರಿ, ಸೌಹಾರ್ದತೆ, ಸಹಕಾರ ಇತ್ಯಾದಿ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜ ಸುಧಾರಣೆಗೆ ತೊಡಗುತ್ತಾನೆ.
4. ಸಂಸ್ಕೃತಿಯ ಸಂರಕ್ಷಣೆ ಮತ್ತು ಬೆಳವಣಿಗೆ
ನಮ್ಮ ನಾಡು-ನುಡಿ, ನಂಬಿಕೆ, ಆಚರಣೆ, ಹಬ್ಬ, ಉಡುಗೆ, ಕಲೆ ಇತ್ಯಾದಿಗಳು ನಮ್ಮ ಸಂಸ್ಕೃತಿಯ ಭಾಗ. ಈ ಸಂಸ್ಕೃತಿಯು ಮುಂದಿನ ತಲೆಮಾರಿಗೆ ವರ್ಗಾವಣೆಯಾಗುವುದು ಶಿಕ್ಷಣದ ಮೂಲಕವೇ ಸಾಧ್ಯ. ಶಾಲೆಗಳಲ್ಲಿ ಪಾಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ದೇಶಭಕ್ತಿ, ಪರಂಪರೆ ಗೌರವ, ಸಾಹಿತ್ಯ ಮತ್ತು ಕಲೆಗಳ ಮೆಚ್ಚುಗೆಯನ್ನು ಬೆಳೆಸಬಹುದು.
ಉಪಸಂಹಾರ
ಶಿಕ್ಷಣ ಎಂಬುದು ಕೇವಲ ಶಾಲೆಗಿಂತಲೂ ವ್ಯಾಪಕವಾದ ಅಂಶವಾಗಿದೆ. ಇದು ವ್ಯಕ್ತಿಯ ವೈಯಕ್ತಿಕ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಜಗತ್ತಿನ ಒಟ್ಟು ಗುಣಮಟ್ಟದ ಸುಧಾರಣೆಗೆ ಶಿಕ್ಷಣವೇ ಮೂಲವಿದೆ. ಇಂದು ತಂತ್ರಜ್ಞಾನ ಸಹಾಯದಿಂದ ಶಿಕ್ಷಣವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ. ಅತೀತದ ಪಾಠಗಳು ಹಾಗೂ ಇಂದಿನ ತಂತ್ರಜ್ಞಾನದ ಸಂಗಮವೇ ನಮ್ಮ ಶಿಕ್ಷಣ ವ್ಯವಸ್ಥೆಯ ಭವಿಷ್ಯವನ್ನು ರೂಪಿಸುತ್ತವೆ.
0 comments:
Post a Comment